ಹನಿ ಹನಿ ಕವನ

**************
ಕಡಲಾಳದಲ್ಲಿ
ಒಡಲಾಳದ
ಭೋರ್ಗರೆತ
ಭೂಕಂಪ
ಭರತ ಇಳಿತ
ಅನವರತ
****************

ಇಷ್ಟ

ಅವಳಿಗೆ
ಬೆಡ್ ರೂಂ ಇಷ್ಟ
ಆದರೆ,
ಮನೆಯದ್ದಲ್ಲ
***************

ಬರೆದಂತೆ ಸಾಲುಗಳು

ಹುಣ್ಣಿಮೆ ಚಂದಿರ ನನ್ನ ಗೆಳೆಯ
ದೂರದ ಚುಕ್ಕಿ ನನ್ನ ಸಖಿ....

ನಾನು ರೆಕ್ಕೆ ಸೋಲದ
ಎಲ್ಲೇ ಮೀರಿದ ಹಕ್ಕಿ...

ಬೆಳದಿಂಗಳ ಬಯಸಿ ಹಾರುವೆ ಜಗವಿಡಿ
ರೆಕ್ಕೆ ಸೋತರು ನಾನು ಸೋಲಲಾರೆ

ಕೊನೆಯವರೆಗೆ ಹಾರೋದು ಮಾತ್ರ ನನ್ನ ಕೆಲಸ
ಚಂದಿರ ಜೊತೆ ಇರೋ ತನಕ
ಚುಕ್ಕಿ ಸಖಿ ಅಗೋ ತನಕ
*********************

ನೆನಪು

ಸಿ ಅಶ್ವಥ್ ಇನ್ನಿಲ್ಲ
ಅಂತ ಯಾರೋ
ಹೇಳಿದರು
ನಾನು mp3 ಆನ್ ಮಾಡಿದೆ
ಅಲ್ಲಿ ಅವರು ಹಾಡುತ್ತಿದ್ದರು
********************
ಸ್ನೇಹ
ಸ್ನೇಹ ಸಾಕೆನಿಸಿದರೆ
ಹೇಳು ಹೂವೆ..
ನಾನು ಹೋಗುವೆ
ಸೂರ್ಯನೆಡೆಗೆ
ರೆಕ್ಕೆ ಸುಟ್ಟು ಹೋದ ಮೇಲೆ
ನಿನ್ನ ಬುಡ ಸೇರುವೆ
************************

ಕಣ್ ರೆಪ್ಪೆ ಹೇಳಿದ ಹನಿಗಳು
ನನ್ನನ್ನು
ಸದಾ ಹಿಂಬಾಲಿಸುತಿವೆ
ನೆರಳು ...
ಜೊತೆಗೆ ನಿಟ್ಟುಸಿರು..!
*********
ಪ್ರೀತಿ ಹಿಮಾಲಯದ
ತುತ್ತ ತುದಿಗೆ
ತಲುಪಿ
ಹಿಂತುರುಗಿ ನೋಡಿದಾಗ
ಅಲ್ಲಿ ನೀನರಲಿಲ್ಲ
ನಾನು ಕೆಳಕ್ಕೆ ಧುಮುಕಿದೆ

******
ನೀನು
ಕೈ ಕೊಟ್ಟಾಗ
ಕೇಳಿದ
ನಗುವಿನ ಸದ್ದು
ನನ್ನದಲ್ಲ..
ವಿಧಿಯದ್ದು .!

****
ನೀನು
ಚಂದ್ರನ
ತಂದು ಕೊಡೆಂದು
ಕೇಳಿದ ದಿನ
ಅಮಾವಾಸ್ಯೆ
*****************

ಕಹಾನಿ

ಪ್ರೇಮ ಕಹಾನಿ
ಬರೆಯಲು ಕುಳಿತಾಗ

ಏಳು ಗುಡ್ದದಾಚೆ
ಮಮತೆಯ ಗೂಡಲ್ಲಿ ಕಾದು ಕುಳಿತಿಹ
ಅಮ್ಮನ ನೆನಪಾಗಿ

ಕಾಗದದ ಕಹಾನಿ
ಮೇಲೆ
ಎರಡು ಕಣ್ ಹನಿ
*****************

ಚಂದಿರ

ಬಾನ ಚಂದಿರನ
ತಂದು ಕೊಡೆಂದು
ಕೇಳಿದ ಮಗುವಿಗೆ

ಕಳೆದು ಹೋದ ಇನಿಯನ
ಚಂದಿರನಲ್ಲಿ
ನೋಡುತಿರುವ

ಅಮ್ಮನ ಕಣ್ಣೀರು ಕಾಣಿಸಲಿಲ್ಲ
*********************

ಮಳೆ

ಮುಂಗಾರು ಮಳೆಗೆ
ಕಾಯುತಿದ್ದಳು
ಮಳೆಯೊಂದಿಗೆ ಬಂದ
ಗುಡುಗು ಮಿಂಚಿಗೆ
ಬೆದರಿ
ಬೆವರಿದಳು